ಮಯೂರ
ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ದೈನಿಕ, ಸುಧಾ ವಾರಪತ್ರಿಕೆಗಳನ್ನು ಪ್ರಕಟಿಸಿದ ಉದ್ಯಮಿ ಕೆ ಎನ್ ಗುರುಸ್ವಾಮಿ ನೇತೃತ್ವದ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಾಲ್ಕನೇ ಪ್ರಕಟಣೆ `ಮಯೂರ ಕಥಾ ಸಾಹಿತ್ಯ ಪ್ರಧಾನ ಮಾಸಪತ್ರಿಕೆ. 1965ರಲ್ಲಿ ಪ್ರಕಟಣೆ ಆರಂಭಿಸಿತು. ತಿಂಗಳ ತಿಳಿಗಾಳಿನಂತಹ ತಿಳಿಹಾಸ್ಯ, ಪ್ರತಿಭಾಸಂದರ್ಶನ, ಜಗತ್‍ಪ್ರಸಿದ್ಧವಾದ ಕತೆಗಳ ಅನುವಾದ ಪ್ರಕಟಣೆ ಇದರ ಆರಂಭದ ವೈಶಿಷ್ಟ್ಯ. ಮುಮ್ಮಡಿ ಕೃಷ್ಣರಾಜ ಒಡೆಯರ್ ಬರೆದ `ಸೌಗಂಧಿಕಾ ಪರಿಣಯ ಮತ್ತು ಗುಲ್ವಾಡಿಯವರ `ಇಂದಿರಾಬಾಯಿ ಸೇರಿದಂತೆ ಕನ್ನಡದ ಆರಂಭಕಾಲದ ಕಾದಂಬರಿಗಳನ್ನು ಸಂಗ್ರಹರೂಪದಲ್ಲಿ ಪ್ರಕಟಿಸಿತು. (ಸಂಗ್ರಹ: ನಿರಂಜನ) ಕಥಾಸಾಹಿತ್ಯದ ಪರಿಧಿಯಲ್ಲೇ ಅನೇಕ ಪ್ರಯೋಗಗಳನ್ನು ನಡೆಸಿತು. ಐತಿಹಾಸಿಕ, ಪೌರಾಣಿಕ, ಪತ್ತೇದಾರಿ ವೈಜ್ಞಾನಿಕ ಪ್ರಕಾರಗಳಿಗೆ ಸೇರಿದ ಕತೆಗಳಲ್ಲದೆ, ಓದುಗರೂ ಕಥಾಸಾಹಿತ್ಯ ರಚನೆಗೆ ಪ್ರಚೋದನೆ ನೀಡುತ್ತಿದ್ದ ಅಂಕಣಗಳು; `ಅಂಗೈಯಲ್ಲಿ ಅರಮನೆ, ಬುತ್ತಿಚಿಗುರು ಮತ್ತು ಖ್ಯಾತ ಕತೆಗಾರರು ಬರೆದ `ಅಪೂರ್ಣ ಕತೆಗೆ ಪೂರ್ಣಗೊಳಿಸುವ ಅವಕಾಶ. ಇದು ಜನಪ್ರಿಯ ಪ್ರಯೋಗವಾಗಿತ್ತು. ಜಾನಪದ ವಿಶೇಷಾಂಕ, ಕಥಾ ವಿಶೇಷಾಂಕ, ಮಹಿಳಾ ವಿಶೇಷಾಂಕ, ಪತ್ತೇದಾರಿ ಕತೆಗಳ ವಿಶೇಷಾಂಕಗಳನ್ನು ತರುವ ಮೂಲಕ `ಮಯೂರ ಮಾಸಿಕಗಳಲ್ಲಿ ಹೊಸ ಪ್ರಯೋಗವನ್ನೇ ನಡೆಸಿತು. ಇತ್ತೀಚಿನ ವರ್ಷಗಳಲ್ಲಿ ಕತೆಗಳೇ ಅಲ್ಲದೆ, ವಿಮರ್ಶೆ, ಹನಿಗವನ, ಕವನ ಹೀಗೆ ತನ್ನ ಪರಿಧಿಯನ್ನು ವಿಸ್ತರಿಸಿಕೊಂಡಿದೆ. ಆಯಾ ತಿಂಗಳು ಪ್ರಕಟವಾಗುವ ಹೊಸ ಸಾಹಿತ್ಯ ಕೃತಿಯ ಬಗ್ಗೆ ಚರ್ಚೆ ಕೂಡ ಉಪಯುಕ್ತ ಅಂಕಣವಾಗಿದೆ. ಮಯೂರ ಅನೇಕ ಹೊಸ ಕತೆಗಾರರಿಗೆ ಪ್ರೋತ್ಸಾಹ ನೀಡಿತು. ಪುಟಕ್ಕೊಂದು ವ್ಯಂಗ್ಯಚಿತ್ರ ನಿಡಿ, ಹೊಸ ವ್ಯಂಗ್ಯ ಚಿತ್ರಕಾರರ ಸೃಷ್ಟಿಗೆ ನಾಂದಿ ಹಾಡಿತು.

ಪತ್ರಿಕೆಯ ಮೊದಲ ಸಂಪಾದಕರು ಕೆ ಎನ್ ನೆಟ್ಟಕಲ್ಲಪ್ಪ ಮತ್ತು ಎಂ ಬಿ ಸಿಂಗ್, ಆನಂತರದ ಸಂಪಾದಕರು ಕೆ ಎನ್ ಹರಿಕುಮಾರ್. ಈಗಿನ ಸಂಪಾದಕರು ಕೆ ಎನ್ ಶಾಂತಕುಮಾರ್.			
(ಗಂಗಾಧರ ಮೊದಲಿಯಾರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ